ಪ್ರಾಣಿಸಂಗ್ರಹ

	ವಿವಿಧ ಪ್ರಾಣಿಗಳನ್ನು ಒಂದೆಡೆ ಜೀವಂತವಾಗಿ ಇಲ್ಲವೇ ನಿರ್ಜೀವವಾಗಿ ಕಲೆಹಾಕುವುದು (ಜûೂಆಲಾಜಿಕಲ್ ಕಲೆಕ್ಷನ್). ಇದರ ಇತಿಹಾಸ ಬಹಳ ಪ್ರಾಚೀನವಾದ್ದು.  ಶಿಲಾಯುಗದ ಮಾನವ ನಾಗರಿಕನಾದಂತೆ ಹಲವಾರು ಪ್ರಾಣಿಗಳನ್ನು ಸಂಗ್ರಹಿಸಿ ಪಳಗಿಸಿ ಅವನ್ನು ಕೃಷಿ ಮತ್ತಿತರ ಕೆಲಸಗಳಿಗೆ ಉಪಯೋಗಿಸಿಕೊಳ್ಳುವುದರೊಂದಿಗೆ ಪ್ರಾಣಿಸಂಗ್ರಹಣೆಯಲ್ಲಿ ಆಸಕ್ತಿಯನ್ನೂ ಬೆಳೆಸಿಕೊಂಡ.  ಮುಂದೆ ಸಾಮ್ರಾಜ್ಯಗಳ ಸ್ಥಾಪನೆಯಾದಾಗ ರಾಜ ಮಹಾರಾಜರುಗಳು ಪ್ರಾಣಿ ಸಂಗ್ರಹಣೆ ಮತ್ತು ಸಾಕಣೆ ಒಂದು ಗೌರವವೆಂದು ಭಾವಿಸಿ ಈ ಹವ್ಯಾಸವನ್ನು ಮುಂದುವರಿಸಿಕೊಂಡು ಬಂದರು.  ಹೀಗೆ ಕೆಲವರಲ್ಲಿ ಪ್ರಾಣಿ ಸಂಗ್ರಹಣೆ ಗೌರವ ಹವ್ಯಾಸವಾಗಿ ಬೆಳೆದರೆ ಇನ್ನು ಕೆಲವರಲ್ಲಿ ಅಧ್ಯಯನ ಅವಶ್ಯಕತೆಯಾಗಿ ರೂಪುಗೊಂಡಿತು.  ಪ್ರಾಣಿಗಳನ್ನು ಜೀವಂತವಾಗಿ ಹಿಡಿದು ರಕ್ಷಿಸುವ ಸಂಘ ಸಂಸ್ಥೆಗಳೂ ಪ್ರಾಣಿ ಸಂಗ್ರಹಾಲಯಗಳೂ ಉದಯವಾದವು.

	ಪ್ರಾಣಿಸಂಗ್ರಹಣೆಯಲ್ಲಿ ವಿವಿಧ ಬಗೆಗಳುಂಟು. ಒಂದೇ ಗುಂಪಿನ ಪ್ರಾಣಿಗಳನ್ನು ಸಂಗ್ರಹ ಮಾಡಿರುವುದು ಒಂದು ತೆರನಾದುದು.  ಉದಾಹರಣೆಗೆ ಉತ್ತರ ಅಮೆರಿಕದ ಟೆನೆಸ್ಸಿ ಪ್ರಾಂತದ ಲಿಂಡ್ಸ್‍ಲೇ ಎಂಬಾತ ಪ್ರಪಂಚದ ಬೇರೆ ಬೇರೆ ಭಾಗಗಳಿಂದ ಈ ತನಕ ಸುಮಾರು 40,000 ವಿವಿಧ ಜಾತಿಯ ಪತಂಗಗಳನ್ನು ಸಂಗ್ರಹಿಸಿದ್ದಾನೆ.  ಒಂದೇ ಕುಟುಂಬದ ಒಂದೇ ಜಾತಿಯ ಪ್ರಾಣಿಗಳನ್ನು ಅಂತೆಯೇ ಒಂದು ವರ್ಗಕ್ಕೆ ಇಲ್ಲವೇ ಒಂದು ಗಣಕ್ಕೆ ಸೇರಿದ ಪ್ರಾಣಿಗಳನ್ನು ಸಂಗ್ರಹಿಸಿರುವುದೂ ಉಂಟು. ಸರ್ಪೋದ್ಯಾನ, ಪಕ್ಷಿಧಾಮ, ಮತ್ಸ್ಯಾಗಾರ ಮುಂತಾದವು ಈ ಬಗೆಯ ಸಂಗ್ರಹಗಳಿಗೆ ಉದಾಹರಣೆಗಳು. ಹಲವಾರು ಗಣ, ಕುಟುಂಬ ಇಲ್ಲವೆ ವರ್ಗಗಳಿಗೆ ಸೇರಿದ ಪ್ರಾಣಿಗಳನ್ನು ಸಂಗ್ರಹಿಸುವುದು ಇನ್ನೊಂದು ತೆರನ ಪ್ರಾಣಿಸಂಗ್ರಹ. ಉದಾಹರಣೆಗೆ ಯಾವುದೇ ಪ್ರಾಣಿಸಂಗ್ರಹಾಲಯ.

	ಐತಿಹಾಸಿಕವಾಗಿ ಪ್ರಾಣಿಸಂಗ್ರಹ ಬಹಳ ಹಿಂದೆ ಪ್ರಾರಂಭವಾಯಿತೆಂದು ಎನ್ನಲಾಗಿದೆ.  ಆದರೆ ಅಧ್ಯಯನ ದೃಷ್ಟಿಯಿಂದ ಪ್ರಾಣಿಗಳ ಸಂಗ್ರಹ ಪ್ರಾರಂಭವಾದ್ದು ಬಹಳ ಇತ್ತೀಚೆಗೆ, 18ನೆಯ ಶತಮಾನದ ಆದಿಯ ಸುಮಾರಿಗೆ.  ಅಂದಿನಿಂದ ಇಂದಿನ ತನಕ ಗತಿಸಿರುವ ಮೂರು ಶತಮಾನಗಳ ಸಂಗ್ರಹಕಾರ್ಯಗಳಲ್ಲಿ ಬೀಗಲ್‍ಯಾನ ಬಲು ಮುಖ್ಯವಾದ್ದು. 1829 ಅಗಸ್ಟ್ 29ರಂದು ಪ್ರಾರಂಭವಾದ ಈ ಯಾನದಲ್ಲಿ ಫೆಸಿಫಿಕ್ ಮಹಾಸಾಗರ ಮತ್ತು ಅದರ ದ್ವೀಪಗಳಲ್ಲಿ ಪ್ರಾಣಿ ಸಂಗ್ರಹಣೆ ಮಾಡಲಾಯಿತು.  ಈ ತಂಡದಲ್ಲಿ ಜೀವವಿಜ್ಞಾನ ವಿಭಾಗದ ಪ್ರಮುಖ ಚಾಲ್ರ್ಸ್ ಡಾರ್ವಿನ್ (1809-82) ಸಹಸ್ರಾರು ಪ್ರಾಣಿಗಳನ್ನೂ ಪಳೆಯುಳಿಕೆಗಳನ್ನೂ ಸಂಗ್ರಹಿಸಿದ.  ಸತತ ಎರಡು ವರ್ಷಗಳ ಯಾನಾನಂತರ ಸ್ವದೇಶಕ್ಕೆ ಮರಳಿದ ಡಾರ್ವಿನ್, ನೈಸರ್ಗಿಕ ಆಯ್ಕೆಯಿಂದ ಪ್ರಭೇದೋತ್ವತ್ತಿ ಎಂಬ ಪುಸ್ತಕವನ್ನು ರಚಿಸಿ ಜೀವವಿಜ್ಞಾನದಲ್ಲಿ ಕ್ರಾಂತಿಯನ್ನೇ ಉಂಟುಮಾಡಿದ. ಬೀಗಲಾಯಾನದ ಬೇರೆ ಬೇರೆ ಮಹನೀಯರು ಅಧ್ಯಯನ ದೃಷ್ಟಿಯಿಂದ ಅಥವಾ ಹವ್ಯಾಸದ ದೃಷ್ಟಿಯಿಂದ ಅಂಥ ಯಾನಗಳನ್ನು ಕೈಗೊಂಡಿರುವುದು ಉಂಟು.

	ಪ್ರಾಣಿಸಂಗ್ರಹಕ್ಕೆ ಅತ್ಯಾವಶ್ಯಕವಾದ ಉಪಕರಣಗಳೆಂದರೆ ಬಲೆ, ಬೋನು, ಪಾಶ ಇತ್ಯಾದಿ. ಅಂತೆಯೇ ಹಿಡಿದ ಪ್ರಾಣಿಗಳನ್ನು ಜೀವಂತವಾಗಿ ರಕ್ಷಿಸಿ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಿ ಕಾಪಾಡಲು ಕೆಲವು ಸಲಕರಣೆಗಳು ಬೇಕು.  ಹಿಡಿದ ಪ್ರಾಣಿಗಳನ್ನು ಜೀವಂತವಾಗಿ ಬೇರೆಡೆಗೆ ಸಾಗಿಸಲು ಸಾಧ್ಯವಾಗದಾಗ ಅವನ್ನು ಸಾಯಿಸ ಬೇಕಾಗುತ್ತದಾದರೂ ಅವು ಜೀವಂತ ಸ್ಥಿತಿಯಲ್ಲಿ ಇವೆಯೇನೋ ಎಂಬ ಭ್ರಮೆ ಮೂಡುವಂತೆ ಮಾಡಲು ಕೆಲವು ಸಲಕರಣೆಗಳೂ ರಾಸಾಯನಿಕ ವಸ್ತುಗಳೂ ಅಗತ್ಯ. 

	ಪ್ರಾಣಿಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಅಥವಾ ಹಿಡಿದ ಸ್ಥಳದಿಂದ ರಕ್ಷಿಸುವ ಸ್ಥಳಕ್ಕೆ ಕೊಂಡೊಯ್ಯುವಾಗ ವಿಭಿನ್ನ ವಸ್ತುಗಳನ್ನು ಬಳಸಬೇಕಾಗುತ್ತದೆ.  ಪ್ರಾಣಿಗಳಿಗೆ ತಕ್ಕ ಆಹಾರ ಮತ್ತು ಪರಿಸರಗಳನ್ನು ಒದಗಿಸುವುದು ಮುಖ್ಯ.  ಒಂದೊಂದು ಪ್ರಾಣಿಯ ಆವಶ್ಯಕತೆ ಒಂದೊಂದು ರೀತಿ.  ಫಾರ್ಮಲಿನ್ ದ್ರಾವಣ, ಅಸಿಟಿಕ್ ಆಮ್ಲ, ಆಲ್ಕೊಹಾಲ್, ಮೆಗ್ನೀಸಿಯಮ್ ಸಲ್ಫೇಟ್ ಇವು ಪ್ರಾಣಿ ಸಂಗ್ರಹಕ್ಕೆ ಬೇಕಾಗುವ ಅತ್ಯಾವಶ್ಯಕ ರಾಸಾಯನಿಕಗಳು. 

	ಪ್ರಾಣಿ ಸಂಗ್ರಹಾಲಯಗಳು : ಜೀವಂತ ಮೃಗ, ಪಕ್ಷಿ ಅಥವಾ ಕೆಲವು ಸಾಕುಪ್ರಾಣಿಗಳನ್ನು ಒಂದೆಡೆ ಕೂಡಿಸಿ ಬಂಧಿಸಿಡುವ ತಾಣಗಳೇ ಪ್ರಾಣಿಸಂಗ್ರಹಾಲಯಗಳು.  ಕೆಲವು ಪ್ರಾಣಿಸಂಗ್ರಹಾಲಯಗಳಲ್ಲಿ ನಿರ್ಜೀವ ಪ್ರಾಣಿಗಳನ್ನೂ ಪ್ರಾಣಿ ಮಾದರಿಗಳನ್ನೂ ಪಳೆಯುಳಿಕೆಗಳನ್ನೂ ಇಡುವುದುಂಟು.

 	ಪ್ರಾಣಿಸಂಗ್ರಹಾಲಯಗಳ ಇತಿಹಾಸವೂ ಪ್ರಾಚೀನವಾದ್ದೇ.  ಕ್ರಿ.ಪೂ. 1150ರಲ್ಲಿ ಚೀನದೇಶದ ರಾಣಿ ತಾಂಕೀ ಎಂಬಾಕೆ ಅಮೃತ ಶಿಲೆಯ ದೊಡ್ಡ ಹರಿಣಮಂದಿರವನ್ನು ಕಟ್ಟಿಸಿದಳೆನ್ನಲಾಗಿದೆ.  ಕ್ರಿ.ಪೂ. 1000ದಲ್ಲಿ ಚೀನದ ಲಂಗೆ ಎಂಬಾತ 1500 ಎಕರೆ ವಿಸ್ತಾರವುಳ್ಳ ಪ್ರಾಣಿಸಂಗ್ರಹಾಲಯವೊಂದನ್ನು ನಿರ್ಮಿಸಿದ.  ಬ್ಯಾಬಿಲೋನಿಯದ ದೊರೆಗಳೂ ಪ್ರಾಣಿಸಂಗ್ರಹಾಲಯಗಳನ್ನು ಇಟ್ಟುಕೊಂಡಿದ್ದರೆಂಬ ಉಲ್ಲೇಖವಿದೆ.  ಅರಿಸ್ಟಾಟಲನ ಕಾಲದ ಅನಂತರ ಅಧ್ಯಯನ ದೃಷ್ಟಿಯಿಂದ ಇವನ್ನು ಪ್ರಾರಂಭಿಸಲಾಯಿತು. 

	ಹದಿನೆಂಟನೆಯ ಶತಮಾನದ ಮಧ್ಯಭಾಗದಲ್ಲಿ ಆಧುನಿಕ ರೀತಿಯ ಸಂಗ್ರಹಾಲಯಗಳು ಪ್ರಾರಂಭವಾದುವು.  ಮ್ಯಾಡ್ರಿಡ್ಡಿನ ಸುಪ್ರಸಿದ್ಧ ರಾಯಲ್ ಪಾರ್ಕ್ ಕ್ರಿಸ್ತ ಶಕ 1775ರಲ್ಲಿ ಪ್ರಾರಂಭವಾಯಿತು.  ಲಂಡನ್ನಿನ ಜೂಆಲಾಜಿಕಲ್ ಸೊಸೈಟಿಯ ಪ್ರಾಣಿಸಂಗ್ರಹಲಯವಾದ ರೀಜೆಂಟ್ ಉದ್ಯಾನವನ್ನು 1825ರಲ್ಲಿ ಪ್ರಾರಂಭಿಸಲಾಯಿತು.  19ನೆಯ ಶತಮಾನದಲ್ಲಿ ಪ್ರಪಂಚದ ಹಲವಾರು ಭಾಗಗಳಲ್ಲಿ ಪ್ರಾಣಿ ಸಂಗ್ರಹಾಲಯಗಳು ಸ್ಥಾಪನೆಗೊಂಡವು.  ಸದ್ಯ ಪ್ರಪಂಚದಲ್ಲಿ ಶತಮಾನ ಮೀರಿದ ಸುಮಾರು 40 ಪ್ರಾಣ ಸಂಗ್ರಹಾಲಯಗಳಿವೆ.  ಒಟ್ಟು ಪ್ರಾಣಿ ಸಂಗ್ರಹಾಯಗಳಿವೆ.  ಒಟ್ಟು ಪ್ರಾಣಿ ಸಂಗ್ರಹಾಲಯಗಳ ಸಂಖ್ಯೆ 1000 ಕ್ಕೂ ಹೆಚ್ಚು. ಈಚೆಗೆ ಪ್ರಾಣಿ ಸಂಗ್ರಹಾಲಯಗಳಿಗೆ ಇನ್ನೊಂದು ದೃಷ್ಟಿಯಿಂದ ಕೂಡ ಮಹತ್ತ್ವ ಬಂದಿದೆ, ಇವುಗಳ ಕಾರ್ಯ ಕೇವಲ ಪ್ರಾಣಿ ಅಧ್ಯಯನ ಮಾತ್ರವನ್ನ.  ನಶಿಸುತ್ತಿರುವ ಕೆಲವು ಪ್ರಾಣಿಗಳನ್ನು ರಕ್ಷಿಸುವ ಕಾರ್ಯ ಸಹ ಇವುಗಳ ಕಾರ್ಯವ್ಯಾಪ್ತಿಗೆ ಸೇರಿದೆ. 

	ಪಕ್ಷಿಧಾಮ : ನೈಸರ್ಗಿಕ ಪರಿಸರದಲ್ಲಿಯೇ ಪಕ್ಷಿರಕ್ಷಣೆ ಮಾಡುವ ಸ್ಥಳವಿದು.  ನಿರ್ದಿಷ್ಟ ಸ್ಥಳವೊಂದನ್ನು ಅದರಲ್ಲೂ ಹೆಚ್ಚು ಸಂಖ್ಯೆಯಲ್ಲಿ ಪಕ್ಷಿಗಳು ಇರುವ ಸ್ಥಳವನ್ನು ಆಯ್ದು ಕೆಲವು ಕಾನೂನುಗಳ ಮೂಲಕ ಅಲ್ಲಿಯ ಪಕ್ಷಿಗಳನ್ನು ರಕ್ಷಿಸುವುದೇ ಪಕ್ಷಿಧಾಮಗಳ ಕಾರ್ಯ.

	ಮತ್ಸ್ಯಾಗಾರ (ಅಕ್ವೇರಿಯಮ್) : ಜಲಚರಗಳನ್ನು ಮುಖ್ಯವಾಗಿ ಮೀನುಗಳನ್ನು ಒಂದೆಡೆ ಕಲೆಹಾಕಿ ಇಡುವ ನೀರಿನ ಸಂಪುಟ ಅಥವಾ ತಾಣ.  ಇದು ಒಂದು ಚಿಕ್ಕ ಕೊಳ ಅಥವಾ ಕೊಳಗಳ ಗುಂಪಾಗಿದ್ದು ಒಂದು ಪಕ್ಕದಿಂದ ಅದರಲ್ಲಿರುವ ಜಲಚರಗಳನ್ನು ವೀಕ್ಷಿಸುವುದಕ್ಕೆ ಸಾಧ್ಯವಾಗುವಂತಿರುತ್ತದೆ.  ಇದರ ಉದ್ದೇಶ ಕೇವಲ ಹವ್ಯಾಸವಾಗಿರಬಹುದು ಅಥವಾ ಸಾರ್ವಜನಿಕ ಮನೋರಂಜನೆ ಇರಬಹುದು. 

	ಮೀನುಗಳ ಸಂರಕ್ಷಣೆಯನ್ನು ತೊಡಗಿದವರು ಸುಮೇರಿಯನ್ನರು.  ಈಗೆ ಸುಮಾರು 4500ವರ್ಷಗಳಷ್ಟು ಹಿಂದೆಯೇ ಇವರು ಮೀನುಗಳನ್ನು ಸಂಗ್ರಹಿಸಿ ಕೃತಕ ಕೊಳಗಳಲ್ಲಿ ಇಡುತ್ತಿದ್ದರೆಂದು ಹೇಳಲಾಗಿದೆ.  ಈಜಿಪ್ಟಿನಲ್ಲೂ ಮೀನು ಸಾಕಣೆ ರೂಢಿಯಲ್ಲಿತ್ತು ಎಂಬುದಕ್ಕೆ ದಾಖಲೆಗಳಿವೆ.  ಕ್ರಿ. ಪೂ. 1000ಕ್ಕೂ ಹಿಂದೆ ಚೀನದಲ್ಲಿ ಮತ್ಸ್ಯಸಂಕರ ನಡೆಸುತ್ತಿದ್ದರೆನ್ನಲಾಗದೆ, ಆ ಜನ ಆಹಾರಕ್ಕಾಗಿ ಮೀನುಸಾಕುತ್ತಿದ್ದರು.  ಅಧ್ಯಯನ ದೃಷ್ಟಿಯಿಂದ ಮೀನುಗಳ ಸಂಗ್ರಹ ಆರಂಭವಾದ್ದು ಕ್ರಿ, ಶ, 1850ರ ಅನಂತರ, ಪ್ರಪಂಚದ ಮೊತ್ತಮೊದಲ ಮತ್ಸ್ಯಾಗಾರ ಇಂಗ್ಲೆಂಡಿನ ರೀಜೆಂಟ್ ಉದ್ಯಾನದಲ್ಲಿ ಸ್ಥಾಪಿತವಾಯಿತು (1853).  ಈಗ ಪ್ರಪಂಚದ ಬಹುತೇಕ ದೊಡ್ಡ ನಗರ ಎಲ್ಲವುಗಳಲ್ಲೂ ಮತ್ಸ್ಯಾಗಾರಗಳುಂಟು.  ಸಾಗರವಾಸಿ ಪ್ರಾಣಿಗಳ ಅತ್ಯಂತ ಭಾರಿ ಸಂಗ್ರಹಾಲಯ ಫ್ಲಾರಿಡದ ಮೇರಿಲ್ಯಾಂಡಿನಲ್ಲಿದೆ. 

	ಮುಂಬಯಿಯಲ್ಲಿರುವ ತಾರಾ ಪುರೇವಾಲಾ ಮತ್ಸ್ಯಾಗಾರವೇ ಭಾರತದ ಅತಿದೊಡ್ಡ ಮತ್ಸ್ಯಾಗಾರ.  ಇದರಲ್ಲಿ ಸಿಹಿನೀರು ಹಾಗೂ ಸಮುದ್ರವಾಸಿ ಮೀನುಗಳಲ್ಲದೆ ಹಲವು ಕಂಟಕಚರ್ಮಿಗಳನ್ನೂ ಸಂಧಿಪದಿಗಳನ್ನೂ ಸಂಗ್ರಹಿಸಿಡಲಾಗಿದೆ.
(ಎಸ್.ಎನ್.ಎಜ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ